ಶನಿವಾರ, ಜೂನ್ 28, 2014

ಗುರುವಿನೊಂದಿಗಿರಲು ಗುಂಡಿಗೆ ಬೇಕು

ಜೆನ್,ಜೆಸ್ಟ್,ಜಿಪ್,ಜ್ಯಾಪ್ ಅಂಡ್ ಜಿಂಗ್ ಉಪನ್ಯಾಸಮಾಲಿಕೆಯ ಏಳನೆಯ ಉಪನ್ಯಾಸದ ಸಂಗ್ರಹಾನುವಾದ.

ನೂರು ಮಂದಿ ಗುರುಗಳು ಎನ್ನಿಸಿಕೊಂಡವರಲ್ಲಿ ಒಬ್ಬನು ಮಾತ್ರ ಗುರು, ಉಳಿದ ತೊಂಬತ್ತೊಂಬತ್ತು ಮಂದಿ ಶಿಕ್ಷಕರಾಗಿರುತ್ತಾರೆ. ಶಿಕ್ಷಕನು ಆವಶ್ಯಕವಾಗಿ ಹೆಚ್ಚು ಓದಿದವನಾಗಿರುತ್ತಾನೆ. ಗುರುವಿಗೆ ಓದು ಅವಶ್ಯಕವಲ್ಲ. ಶಿಕ್ಷಕ ಸಂಪ್ರದಾಯ, ಕಟ್ಟಳೆ, ಸಮಾಜದ ರೀತಿ ನೀತಿ, ಶಾಸ್ತ್ರ-ಸಂಹಿತೆಗಳನ್ನು ಅರೆದು ಕುಡಿದಿರುತ್ತಾನೆ. ಆತನದು ಎರವಲು ಜೀವನ. ಎರವಲು ಪಡೆದ ಯಾವ ಸಂಗತಿಗಳೂ ಜೀವನವನ್ನು ಹಗುರವಾಗಿಸುವುದಿಲ್ಲ. ಸ್ವಂತಿಕೆಯಿಲ್ಲದ ವ್ಯಕ್ತಿ ಭಾರವಾಗಿ, ಸಪ್ಪೆಯಾಗಿ, ಶುಷ್ಕವಾಗಿ, ಸತ್ತವನಂತೆ ಇರುತ್ತಾನೆ. ಗುರು ಬಂಡುಕೋರ925103951-2887690-2 . ಆತ ತನ್ನ ಸ್ವಂತಿಕೆಯಿಂದ ಬದುಕುತ್ತಾನೆ. ಆತ ಅಪ್ರಯತ್ನ ಪೂರ್ವಕವಾಗಿ, ಸಹಜವಾಗಿರುತ್ತಾನೆ, ಸಾಂಪ್ರದಾಯಿಕವಾಗಿ ಅಲ್ಲ. ಸಾಂಪ್ರದಾಯಿಕವಾಗಿರುವುದು ಗುರುವಿಗೆ ಅಸಾಧ್ಯ. ಯೇಸು ಹುಟ್ಟಿನಿಂದ ಯಹೂದಿ ಆದರೆ ಆತ ಯಹೂದಿಯಲ್ಲ, ಬುದ್ಧ ಹುಟ್ಟಿನಿಂದ ಹಿಂದು ಆದರೆ ಆತ ಹಿಂದುವಲ್ಲ. ಈ ಮಾತು ಎಲ್ಲಾ ಗುರುಗಳಿಗೂ ಅನ್ವಯಿಸುತ್ತದೆ. ಆದರೆ ಶಿಕ್ಷಕ ಹಾಗಲ್ಲ. ಆತ ಗುರುವಿನ ಅಣಕು ಚಿತ್ರದ ಹಾಗೆ. ಆತ ತಾನು ಗುರು ಎಂಬಂತೆ ನಟಿಸುತ್ತಾನೆ, ಅದು ಆತನ ಅಹಂಕಾರದ ಸುಳಿಯಷ್ಟೇ. ಗುರು ಅಹಂಕಾರರಹಿತನು, ಆತನಲ್ಲಿ ಪ್ರೀತಿಯಲ್ಲದೆ ಬೇರೇನು ಇಲ್ಲ. ಅಹಂಕಾರ ಕೈಬಿಟ್ಟ ತಕ್ಷಣ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ಪ್ರೀತಿ, ಅನುಕಂಪ ಹಾಗೂ ಮಧುರತೆಗಳು ಆವರಿಸಿಕೊಳ್ಳುತ್ತವೆ. ಅದು ಶುದ್ಧ ಸಂಭ್ರಮ. ಅದೊಂದು ದೀಪಗಳ ಹಬ್ಬ, ಒಂದು ಹಾಡು, ಒಂದು ಕುಣಿತ, ಕಾರಣವಿಲ್ಲದ ಸಂಭ್ರಮ.
ಗುರು ಕಾವ್ಯ ಸಂಗೀತವಿದ್ದಂತೆ. ಶಿಕ್ಷಕನೋ ಗಣಿತ, ಲೆಕ್ಕಾಚಾರಗಳಿದ್ದಂತೆ. ಶಿಕ್ಷಕ ಪದಗಳ ಲೋಕದಲ್ಲಿರುತ್ತಾನೆ, ಗುರು ಪದಗಳಿಗೆ ಮೀರಿ ಜೀವಿಸುತ್ತಿರುತ್ತಾನೆ. ಆದರೆ ನಾವು ಗುರುವನ್ನು ಅರ್ಥಮಾಡಿಕೊಳ್ಳುವ ಭಾಷೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಬಿಟ್ಟಿದ್ದೇವೆ. ಏಕೆಂದರೆ ಒಬ್ಬ ಗುರು ಅವತರಿಸುವುದು ತುಂಬಾ ವಿರಳವಾಗಿ.
ಶಿಕ್ಷಕ ಹೆಚ್ಚು ತಿಳಿದುಕೊಂಡಿರುವವನಾಗಿರುತ್ತಾನೆ, ಹೆಚ್ಚು ಅರ್ಥ ಮಾಡಿಕೊಂಡವನಾಗಿರುತ್ತಾನೆ; ಆತ ಈ ನಮ್ಮ ಮೂರ್ಖ ಅಸ್ತಿತ್ವದ ಭಾಗವಾಗಿರುತ್ತಾನೆ. ಆತನೂ ನಿಮ್ಮಂತೇ ಕುರುಡ. ಆದರೆ ಆತ ನಿಮ್ಮ ಭಾಷೆಯನ್ನು ಮಾತನಾಡುತ್ತಾನೆ. ಹೀಗಾಗಿ ಆತ ನಿಮಗೆ ಅರ್ಥವಾಗುತ್ತಾನೆ. ಗುರು ಕುರುಡನಲ್ಲ. ಆತ ಮಾತನಾಡುವುದು ವಿಶಿಷ್ಟವಾದ ಭಾಷೆ. ಹೀಗಾಗಿ ಆತ ಹೊರಗಿನವನಾಗಿ ಕಾಣುತ್ತಾನೆ. ಶಿಕ್ಷಕ ನಿಮ್ಮವನಾಗಿ ಕಾಣುತ್ತಾನೆ. ಆತನೊಂದಿಗೆ ಹೊಂದಿಕೊಳ್ಳುವುದು ನಿಮಗೆ ಸುಲಭ, ಏಕೆಂದರೆ ಆತ ನಿಮ್ಮ ಮಟ್ಟದಲ್ಲಿಯೇ ಇರುತ್ತಾನೆ. ಗುರು ಅನ್ಯಗ್ರಹದವ, ಆತ ಅಪರಿಚಿತ. ಆತ ನಿಮ್ಮೊಳಗೆ ನಿಮ್ಮ ನಡುವೆ ಬಾಳುತ್ತಿದ್ದರೂ ಅತೀತಕ್ಕೆ ಸೇರಿದವ. ಆತನ ಸಂದೇಶ ದೂರದ, ಅತಿ ದೂರದ ಮೂಲದಿಂದ ಬಂದಿರುತ್ತದೆ. ಗ್ರಹಿಸಿಲ್ಲದ, ಗ್ರಹಿಸಲಾಗದುದರ ಪ್ರತಿನಿಧಿಯಾಗಿ ಆತ ಇಲ್ಲಿರುತ್ತಾನಷ್ಟೆ. ಆತ ನಿಮ್ಮ ಶಾಸ್ತ್ರಗಳ ಭಾಷೆ ಮಾತನಾಡುವುದಿಲ್ಲ, ಆತ ತನ್ನದೇ ಸಂವಹನವನ್ನು ರೂಪಿಸಿಕೊಳ್ಳುತ್ತಾನೆ.
ಗುರುವನ್ನು ನೀವು ಹಗೆಯಂತೆ ಕಾಣುವಿರಿ. ಶಿಕ್ಷಕನ ಬಗ್ಗೆ ನಿಮಗೆ ಅನುಕಂಪವಿರುತ್ತದೆ ಆದರೆ ಗುರುವಿನ ಬಗ್ಗೆ ನಿಮಲ್ಲಿ ಆಳವಾದ ಹಗೆತನವಿರುತ್ತದೆ. ಆತನನ್ನು ಕೊಲ್ಲುವುದಕ್ಕೆ, ನಾಶ ಮಾಡುವುದಕ್ಕೆ ಬಯಸುತ್ತೀರಿ. ಏಕಂದರೆ ಆತ ನಿಮ್ಮ ಬದುಕಲ್ಲಿ ಗೊಂದಲವೇಳಿಸುತ್ತಾನೆ. ನಿಮ್ಮ ಭ್ರಮೆಗಳನ್ನು ಛಿದ್ರಗೊಳಿಸುತ್ತಾನೆ, ನೀವು ಈ ಮೊದಲು ನಂಬಿದ ವಿಚಾರಗಳಿಗೆ ಹೊಡೆತಕೊಡುತಾನೆ. ಆತ ನಿಮ್ಮ ಅಡಿಪಾಯಕ್ಕೇ ಆಘಾತ ಉಂಟುಮಾಡುತ್ತಾನೆ – ನೀವು ನಿಂತಿರುವ ನೆಲವನ್ನೇ ತೆಗೆದು ಹಾಕುತ್ತಾನೆ. ಆತ ನಿಮ್ಮ ವಿಚಾರವಂತಿಕೆ, ನಿಮ್ಮ ಸಮಾಧಾನಗಳನ್ನು ನಾಶ ಮಾಡುತ್ತಾನೆ.
ಸಾಮಾನ್ಯವಾಗಿ ಸಮಾಜವು ಎರಡು ಭಾಗಗಳಾಗಿ ವಿಂಗಡಣೆಯಾಗಿದೆ: ‘ತಲೆ’ಗಳು ಹಾಗೂ ‘ಕೈ’ಗಳು. ನಾವು ಜನರನ್ನು ವಿಂಗಡಿಸಿರುವುದು ಹೀಗೆಯೇ: ಕಾರ್ಮಿಕರು ಹಾಗೂ ಮೇಲ್ವಿಚಾರಕರು. ಇದು ಕಾಕತಾಳೀಯವಲ್ಲ, ಅತಿ ಪ್ರಮುಖವಾದ ಸಂಗತಿ. ತಲೆ ಕೈಗಳನ್ನು ಆಳುತ್ತದೆ. ಆದರೆ ಇಲ್ಲಿ ಮೂರನೆಯ ವಿಂಗಡಣೆ ಇಲ್ಲವೇ ಇಲ್ಲ. – ‘ಹೃದಯ’ಗಳದ್ದು. ಗುರು ತೀರಾ ವಿರಳವಾಗಿರುವ ಈ ಮೂರನೆಯ ವಿಂಗಡಣೆಗೆ ಸೇರುತ್ತಾನೆ.
ಯಾವಗಲೋ ಒಮ್ಮೊಮ್ಮೆ ಅಪರೂಪಕ್ಕೆ ಒಬ್ಬ ಯೇಸು, ಒಬ್ಬ ಬುದ್ಧ, ಒಬ್ಬ ಝರಾತುಷ್ಟ್ರ, ಒಬ್ಬ ಲಾವೋ ತ್ಸು, ಒಬ್ಬ ಚಾಂಗ್ ತ್ಸುವನ್ನು ಕಾಣುತ್ತೀರಿ. ಆದರೆ ಇವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಿಮಗೆ ಸಾಧ್ಯವೇ ಆಗುವುದಿಲ್ಲ.
ನಿಮ್ಮ ಮುಂದಾಳುಗಳು ನಿಜವಾಗಿ ಮುಂದಾಳುಗಳಲ್ಲ, ಅವರು ತಮ್ಮ ಹಿಂಬಾಲಕರನ್ನು ಹಿಂಬಾಲಿಸುವವರು. ನಿಮ್ಮ ಶಿಕ್ಷಕರು ಶಿಕ್ಷಕರಲ್ಲ, ಅವರು ಅನವರತ ನಿಮ್ಮ ಪೂರ್ವಾಗ್ರಹಗಳಿಗೆ ಹೊಂದಿಕೊಳ್ಳುತ್ತಿರುತ್ತಾರೆ. ಇಲ್ಲವಾದರೆ ನೀವು ಅವರನ್ನು ಗೌರವಿಸುವುದಿಲ್ಲ; ಆಗ ಪ್ರತಿಷ್ಟೆಗೆ, ಅಧಿಕಾರಕ್ಕೆ ಅವಕಾಶ ಸಿಕ್ಕುವುದಿಲ್ಲ. ಎಲ್ಲರೂ ಕುರುಡರ ಭಾಷೆ ಮಾತನಾಡುವುದು, ಶಿಕ್ಷಕ ನಿಮಗೆ ಅದನ್ನು ಮನದಟ್ಟು ಮಾಡುತ್ತಾನೆ, ನಿಮ್ಮನ್ನು ಖುಶಿಯಾಗಿಡುತ್ತಾನೆ.
ಗುರು ಮುಚ್ಚಿದ ನಿಮ್ಮ ಗಾಯಗಳನ್ನು ಬೆಳಕಿಗೆ ಒಡ್ಡುತ್ತಾನೆ. ಗುರುವಿನೊಂದಿಗಿರುವುದು ಯಾತನೆಯನ್ನು ಕೊಡುತ್ತದೆ! ಒಬ್ಬನು ಶಿಲುಬೆಯ ಮೇಲೆ ಸಾಯುವುದಕ್ಕೆ, ವಿಷ ಸೇವಿಸುವುದಕ್ಕೆ, ನಿಮ್ಮಿಂದ ಕೊಲ್ಲಲ್ಪಡುವುದಕ್ಕೆ, ಹಿಂಸಿಸಲ್ಪಡುವುದಕ್ಕೆ ಸಿದ್ಧನಾಗದಿದ್ದರೆ ಆತ ಗುರುವಾಗಲಾರ. ಆತ ಸದಾ ಅಪಾಯದೊಂದಿಗೇ ಓಡಾಡುತ್ತಿರುತ್ತಾನೆ.
ಶಿಕ್ಷಕ ನಿಮಗೆ ಹೊಂದಿಕೊಳ್ಳುತ್ತಾನೆ. ಗುರು ಇದಕ್ಕೆ ವಿರುದ್ಧ; ನೀವು ಆತನಿಗೆ ಹೊಂದಿಕೊಳ್ಳಬೇಕು. ನೀವು ಲಕ್ಷಾಂತರ ಸಂಖ್ಯೆಯಲ್ಲಿರುತ್ತೀರಿ, ಬುದ್ಧ ಯಾವಾಗಲೂ ಒಬ್ಬನೇ. ನೀವು ಸದಾ ಬಹುಸಂಖ್ಯಾತರು, ಅಧಿಕಾರವೆಲ್ಲ ನಿಮ್ಮ ಬಳಿಯೇ ಇರುತ್ತದೆ. ನಿಮ್ಮ ಅಧಿಕಾರವೇನಿದ್ದರೂ ಪೊಳ್ಳು. ನೀವು ಯೇಸುವನ್ನು ಶಿಲುಬೆಗೇರಿಸಬಹುದು ಆದರೆ ಆತನ ಚೈತನ್ಯವನ್ನು ಕೊಲ್ಲಲಾಗುವುದಿಲ್ಲ. ಸಾಕ್ರೆಟಿಸನಿಗೆ ವಿಷವುಣ್ಣಿಸಬಹುದು ಆದರೆ ಆತನ ಸಂದೇಶಕ್ಕೆ ವಿಷವಿಕ್ಕಲಾಗುವುದಿಲ್ಲ.
ಈ ಶಿಕ್ಷಕರ ದೊಡ್ಡಿಯಲ್ಲಿ ಒಂದು ವೇಳೆ ನಿಮಗೆ ನಿಜವಾದ ಅರಿವುಳ್ಳ ಗುರು ಸಿಕ್ಕಿದರೂ ಆತನನ್ನು ಗುರುತಿಸುವಲ್ಲಿ ನೀವು ಬಹುಪಾಲು ವಿಫಲರಾಗುತ್ತೀರಿ.ಆತ ಕೋಪಿಷ್ಟನಾಗಿರುತ್ತಾನೆ. ಆತ ಅದೆಂಥ ಆಘಾತಕಾರಿ ವ್ಯಕ್ತಿತ್ವದವನಾಗಿರುತ್ತಾನೆಂದರೆ, ನೀವು ಅಲ್ಲಿಂದ ಪರಾರಿಯಾಗಬೇಕೆಂದು ಬಯಸುತ್ತೀರಿ. ನಿಮಗೆ ಉಸಿರುಗಟ್ಟಿ ಸಾಯುವಂತೆ ಭಾಸವಾಗುತ್ತದೆ. ಆತ ನಿಮ್ಮ ಪ್ರತಿಯೊಂದು ವಿಚಾರವನ್ನು, ಸಿದ್ಧಾಂತವನ್ನು, ನಂಬಿಕೆಯನ್ನು – ಒಟ್ಟಿನಲ್ಲಿ ಏನೇನು ಅತ್ಯಮೂಲ್ಯ ಎಂದು ಭಾವಿಸಿ ಹೊತ್ತಿರುತ್ತೀರೋ – ಅದನ್ನೆಲ್ಲ ಒಡೆದು ಹಾಕುತ್ತಾನೆ. ಅರಿವುಳ್ಳ ಗುರುವಿನ ಬಳಿ ನೀವು ವಜ್ರಗಳೆಂದು ಹೊತ್ತವೆಲ್ಲ ಸಾಮಾನ್ಯ ಕಲ್ಲುಗಳೆಂದು ಅರಿವಾಗುತ್ತದೆ.
ಗುರುವಿನೊಂದಿಗೆ ಇರುವುದಕ್ಕೆ ನಿಜಕ್ಕೂ ಗುಂಡಿಗೆ ಇರಬೇಕು. ಅಹಂಕಾರವನ್ನು, ನಿಮ್ಮ ನಿನ್ನೆಗಳನ್ನು, ನಿಮ್ಮೆಲ್ಲ ಬಂಡವಾಳವನ್ನು ಕೈಬಿಡುವ ಗುಂಡಿಗೆ ಇರಬೇಕು. ಸಮಾಜವನ್ನು ಎದುರುಹಾಕಿಕೊಂಡು, ಸಂಸ್ಕೃತಿಯನ್ನು ಎದುರಿಸಿ, ಇಡೀ ಇತಿಹಾಸವನ್ನು ಎದುರುಹಾಕಿಕೊಂಡು ಅಪಾಯಕಾರಿಯಾಗಿ ಬದುಕುವ ಗುಂಡಿಗೆ ಬೇಕು.
ನಿಜವಾದ ಶಿಷ್ಯ ಬಂಡುಕೋರನಾಗಿರುತ್ತಾನೆ, ಏಕೆಂದರೆ ಆತನ ಗುರು ಪರಮ ಬಂಡುಕೋರನಾಗಿರುತ್ತಾನೆ!

ಮದರ್ ತೆರೇಸಾ ಸೋಗುಗಾತಿ, ಕಪಟಿ, ಹಿಪೋಕ್ರಿಟ್ ಎಂದವನು ಓಶೋ!!!

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು.ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. osho-rajneesh-gray
ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:
ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇ ಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ.
ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ  ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.
ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಈ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಈ ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?
೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು
ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ಆ ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ೧ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಈ ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗುಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು
ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ mother_teresa ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.
ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ಈ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು  ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಈ ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?
ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು. ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ,ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್‌ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.
***
ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಆ ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು.
ಆದರೆ ನಿಜ ವಿಷಯ ಬೇರೆಯದೆ ಇತ್ತು. ಆ ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.
ನಿಮಗೆ ಒಂದು ವಿಷಯ ತಿಳಿದಿರಲಿ ಆ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!
ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ  ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ
ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.
ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿ, ಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ,
ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.
ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಈ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ.
ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು  ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.
ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ.
ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಈ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಈ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ  ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.
ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ
ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.
ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಧರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!
ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ.
ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!

ಏನನ್ನೂ ಕೈಬಿಡದೆ ಎಲ್ಲವನ್ನೂ ಪಡೆಯುವುದು ತ್ಯಾಗ ಅನ್ನಿಸಿಕೊಳ್ಳಲಾರದು October 23, 2009

Posted by uniquesupri in ಓಶೋ ಹೇಳಿದ್ದು.
Tags: , , , ,
1 comment so far
ನಾನೊಂದು ಹಳ್ಳಿಗೆ ಹೋಗಿದ್ದೆ. ಅಲ್ಲಿ ಒಬ್ಬಾತ ಹೇಳುವುದನ್ನು ಕೇಳಿದೆ, “ವೈರಾಗ್ಯವೇ ನಿಜವಾದ ಧರ್ಮ. ತ್ಯಾಗದಿಂದ ವೈರಾಗ್ಯ ಸಾಧ್ಯ. ಕಷ್ಟಕರವಾದ ಸಾಧನೆ ಹಾಗೂ ಶಿಸ್ತಿನಿಂದ ವೈರಾಗ್ಯವನ್ನು ಸಾಧಿಸಬಹುದು.”
ಇದನ್ನು ಕೇಳುತ್ತಿದ್ದ ಹಾಗೆ ನನಗೆ ನನ್ನ ಬಾಲ್ಯದಲ್ಲಿ ನಡೆದ ಘಟನೆಯೊಂದು ನೆನಪಾಯ್ತು. ನದೀ ತೀರಕ್ಕೆ ನಾವು ಪಿಕ್‌ನಿಕ್‌ಗೆಂದು ತೆರಳಿದ್ದೆವು. ನದಿ ಚಿಕ್ಕದಿದ್ದರೂ ಅದರ ಮರಳ ದಂಡೆ ವಿಶಾಲವಾಗಿ ಹರಡಿಕೊಂಡಿತ್ತು. ಆ ದಂಡೆಯ ಮೇಲೆ ಬಣ್ಣ ಬಣ್ಣದ ಹೊಳೆಯುವ ಕಲ್ಲುಗಳ ರಾಶಿಯೇ ಇತ್ತು. ಅದ್ಭುತವಾದ ಸಂಪತ್ತನ್ನು ಎಡವಿ ನಿಂತ ಅನುಭವ ನನಗಾಯ್ತು. ಸಂಜೆಯಾಗುವಷ್ಟರಲ್ಲಿ ನಾನು ಅದೆಷ್ಟು ಕಲ್ಲುಗಳನ್ನು ಒಟ್ಟುಗೂಡಿಸಿದ್ದೆನೆಂದರೆ, ಅವನ್ನು ಹೊತ್ತೊಯ್ಯುವುದೇ ಅಸಾಧ್ಯವಾಗಿತ್ತು. ಅವನ್ನು ಅಲ್ಲಿಯೇ ಬಿಟ್ಟು ಹೊರಡುವಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ನನ್ನ ಸಂಗಡಿಗರಿಗೆ ಆ ಕಲ್ಲುಗಳ ಬಗೆಗಿದ್ದ ನಿರಾಸಕ್ತಿಯನ್ನು ಕಂಡು ನನಗೆ ವಿಪರೀತ ಆಶ್ಚರ್ಯವಾಗಿತ್ತು,
ಆ ದಿನ ಅವರು ನನಗೆ ಅತಿ ದೊಡ್ಡ ವಿರಾಗಿಗಳಾಗಿ ಕಂಡಿದ್ದರು. ಇವತ್ತು ನನಗೆ ಅನ್ನಿಸುವುದೆಂದರೆ, ಒಮ್ಮೆ ಕಲ್ಲುಗಳನ್ನು ಅವು ಕಲ್ಲುಗಳು ಎಂದು ತಿಳಿದ ಮೇಲೆ ತ್ಯಾಗದ, ವೈರಾಗ್ಯದ ಪ್ರಶ್ನೆಯೇ ಹುಟ್ಟದು.
ಅಜ್ಞಾನವೇ ಲೋಲುಪತೆ.
ತಿಳುವಳಿಕೆಯೇ ವೈರಾಗ್ಯ.
ವೈರಾಗ್ಯ ಎಂಬುದು ಸಾಧಿಸಬೇಕಾದ ಸಂಗತಿಯಲ್ಲ. ಅದು ನೀವು ಮಾಡಬೇಕಾದ ಕೆಲಸವಲ್ಲ. ಅದು ತಾನಾಗಿ ಸಂಭವಿಸುವಂಥದ್ದು. ತಿಳುವಳಿಕೆಯಿಂದ ಹುಟ್ಟುವ ಸಹಜವಾದ ಮನಸ್ಥಿತಿಯದು. ಲೋಲುಪತೆ ಯಾಂತ್ರಿಕವಾದದ್ದು. ಅದೂ ಸಹ ನೀವು ಮಾಡಿದ ಕೆಲಸವಲ್ಲ. ನಿಮ್ಮ ಅಜ್ಞಾನದಿಂದ ಸಹಜವಾಗಿ ಹುಟ್ಟುವಂಥದ್ದು.
ಹೀಗಾಗಿ ವೈರಾಗ್ಯವೆಂಬುದು ಅತಿ ಪ್ರಯಾಸಕರವಾದ ಕೆಲಸ ಎಂಬ ಕಲ್ಪನೆ ಅರ್ಥಹೀನವಾದದ್ದು. ಮೊದಲಿಗೆ, ಅದು ನೀವು ಮಾಡಬಹುದಾದಂತಹ ಕೆಲಸವಲ್ಲ- ಕೆಲಸಗಳು ಮಾತ್ರ ಪ್ರಯಾಸಕರವಾಗಿರಬಲ್ಲವು- ಅದೊಂದು ಪರಿಣಾಮ. ಎರಡನೆಯದಾಗಿ, ವೈರಾಗ್ಯದಲ್ಲಿ ಬಿಟ್ಟು ಹೋಗುವಂತೆ ಕಾಣುವ ಸಂಗತಿಯು ಕ್ಷುಲ್ಲಕವಾದದ್ದು. ಪಡೆಯುವಂಥದ್ದು ಅಮೂಲ್ಯವಾದದ್ದು.
ನಿಜಕ್ಕೂ, ತ್ಯಾಗವೆಂಬ ಸಂಗತಿ ಇಲ್ಲವೇ ಇಲ್ಲ. ಏಕೆಂದರೆ ನಾವು ಬಿಟ್ಟುದಕ್ಕಿಂತ ಎಷ್ಟೋ ಪಾಲು ಹೆಚ್ಚಿನದನ್ನು ಪಡೆಯುತ್ತೇವೆ. ನಿಜ ಸಂಗತಿಯೆಂದರೆ, ನಾವು ಬಿಡುವುದು ಕೇವಲ ಸಂಕೋಲೆಯನ್ನು, ಗಳಿಸುವುದು ಬಿಡುಗಡೆಯನ್ನು; ನಾವು ಬಿಡುವುದು ಕೇವಲ ಚಿಪ್ಪುಗಳನ್ನು, ಆದರೆ ಪಡೆಯುವುದು ವಜ್ರಗಳನ್ನು; ನಾವು ಕೈ ಬಿಡುವುದು ಕೇವಲ ಸಾವನ್ನು, ಗಳಿಸುವುದು ಚಿರಂಜೀವಿತ್ವವನ್ನು; ನಾವು ಬಿಡುವುದು ಕತ್ತಲೆಯನ್ನು ಪಡೆಯುವುದು ಅನಂತವಾದ, ಶಾಶ್ವತವಾದ ಬೆಳಕನ್ನು.
ಎಲ್ಲಿದೆ ಇದರಲ್ಲಿ ತ್ಯಾಗ? ಏನನ್ನೂ ಕೈಬಿಡದೆ ಎಲ್ಲವನ್ನೂ ಪಡೆಯುವುದು ತ್ಯಾಗ ಅನ್ನಿಸಿಕೊಳ್ಳಲಾರದು.